ಬಾಲ್ಕನ್ ಯುದ್ಧಗಳು  

ತುರ್ಕಿಯ ಮೇಲೆ ಯುದ್ಧಮಾಡಿ ಗೆದ್ದ ಪ್ರದೇಶಗಳನ್ನು ತಾವು ಹಂಚಿಕೊಳ್ಳಬೇಕೆಂದು ಬಲ್ಗೇರಿಯಾ ಮತ್ತು ಸರ್ಬಿಯಾ 1912 ಮಾರ್ಚ್ 13ರಂದು ರಹಸ್ಯ ಒಪ್ಪಂದ ಮಾಡಿಕೊಂಡವು. ಈ ಒಪ್ಪಂದದಂತೆ ಆಲ್ಬೇನಿಯಾದ ಬಹುಭಾಗ ಸರ್ಬಿಯಾಕ್ಕೆ ಸೇರುತ್ತಿತ್ತು. 1912 ಅಕ್ಟೋಬರ್ 8ರಂದು ತುರ್ಕಿಯ ವಿರುದ್ಧ ಮಾಂಟೆನಿಗ್ರೊ ಯುದ್ಧ ಆರಂಭಿಸಿತು. ಆಕ್ಟೋಬರ್ 13ರಂದು ಇತರ ಬಾಲ್ಕನ್ ದೇಶಗಳು ಐರೋಪ್ಯ ತುರ್ಕಿಯಲ್ಲಿ ಬದಲಾವಣೆಯನ್ನು ಒತ್ತಾಯಿಸುತ್ತ ತಮ್ಮ ಸೈನ್ಯಗಳನ್ನು ಸಜ್ಜುಗೊಳಿಸಿದುವು. ಅಕ್ಟೋಬರ್ 17ರಂದು ಬಲ್ಗೇರಿಯಾ ಮತ್ತು ಸರ್ಬಿಯಾ ವಿರುದ್ಧ ತುರ್ಕಿಯುದ್ಧ ಘೋಷಿಸಿತು. ಮರುದಿನವೇ ಗ್ರೀಸ್ ತುರ್ಕಿಯ ವಿರುದ್ಧ ಯುದ್ಧ ಘೋಷಿಸಿತು. ಒಂದುಗೂಡಿದ ಹಾಗೂ ಸನ್ನದ್ಧವಾದ ಇತರ ದೇಶಗಳ ಸೈನ್ಯಗಳಿಂದ ತುರ್ಕಿ ತುಂಬ ಕಷ್ಟನಷ್ಟ ಅನುಭವಿಸಬೇಕಾಯಿತು. ತುರ್ಕಿಕಾನ್ ಸ್ಟಾಂಟಿನೋಪಲ್ ಬಳಿ ಸಂರಕ್ಷಣೆಯ ಕೊನೆಯ ಹೋರಾಟ ನಡೆಸಿತು. ಅಕ್ಟೋಬರ್ 26ರಂದು ಸ್ಕಾಫ್‍ಯೆ ಮತ್ತು ನವೆಂಬರ್ 8ರಂದು ಸಲನೀಕಾ ಕ್ರಮವಾಗಿ ಸರ್ಬಿಯನ್ನರ ಮತ್ತು ಗ್ರೀಕರ ವಶವಾದುವು.
ತುರ್ಕರ ಕೋರಿಕೆಯಂತೆ 1912 ಡಿಸೆಂಬರ್ 3ರಂದು ಕದನವಿರಾಮ ಘೋಷಿಸಲಾಯಿತು. ಲಂಡನ್ನಿನಲ್ಲಿ ನಡೆದ ಮಾತುಕತೆಯಲ್ಲಿ ತುರ್ಕಿ ತನ್ನ ಐರೋಪ್ಯ ಭೂಪ್ರದೇಶವನ್ನು ಬಿಟ್ಟುಕೊಡಬೇಕೆಂದೂ ಯುದ್ಧ ಪರಿಹಾರ ನೀಡಬೇಕೆಂದೂ ಬಾಲ್ಕನ್ ದೇಶಗಳು ಒತ್ತಾಯಿಸಿದುವು. ಆದರೆ ತುರ್ಕಿ ಒಪ್ಪಲಿಲ್ಲ. ಪರಿಣಾಮವಾಗಿ ಯುದ್ಧ ಮತ್ತೆ 1913 ಫೆಬ್ರುವರಿ 3ರಿಂದ ಮೇ 3ರತನಕ ಮುಂದುವರಿಯಿತು. ಈ ಅವಧಿಯಲ್ಲಿ ಗ್ರೀಕರು ಯೌವನೀನ (ಯಾನೀನ), ಬಲ್ಗೇರಿಯನ್ನರು ಏಡ್ರೀಯಾ ನೋಪಲ್ (ಈಗ ತುರ್ಕಿಯ ಏಡಿರ್ನ) ಮತ್ತು ಮಾಂಟೆನಿಗ್ರೋನಿಯನ್ನರು ಸ್ಕುಟ್ರೀಗಳನ್ನು (ಈಗಿನ ಆಲ್ಬೇನಿ ಯಾದ ಸ್ಕೌಡರ್) ವಶಪಡಿಸಿಕೊಂಡರು. 1913ಮೇ 30 ರಂದು ಲಂಡನ್ನಿನಲ್ಲಿ ಎರಡನೆಯ ಶಾಂತಿ ಸಭೆ ಸೇರಿತು. ಮೇ 30ರ ಒಪ್ಪಂದದಂತೆ ತುರ್ಕಿ ಹೆಚ್ಚು ಕಡಿಮೆ ತನ್ನೆಲ್ಲ ಐರೋಪ್ಯ ಪ್ರದೇಶವನ್ನು ಕಳೆದುಕೊಂಡಿತು. ಆಲ್ಬೇನಿಯಾ ಸ್ವತಂತ್ರವಾಯಿತು. ಸರ್ಬಿಯಾಕ್ಕೆ ಮ್ಯಾಸಿಡೋನಿಯಾದ ಬಹುಭಾಗ ಮತ್ತು ಬಲ್ಗೇರಿಯಾಕ್ಕೆ ಡ್ರೀಯಾನೋಪಾಲ್ ಮತ್ತು ಏಜಿಯನ್ ಸಮುದ್ರದೆಡೆಗೆ ಚಾಚಿದ ಭೂ ಪ್ರದೇಶ ದೊರೆಯಿತು. ಕ್ರೀಟ್ ಮತ್ತಿತರ ದ್ವೀಪಗಳು, ಸುಲನೀಕಾ ಮತ್ತು ಮ್ಯಾಸಿಡೋನಿಯಾದ ಕೆಲಭಾಗ ಗ್ರೀಸಿನ ಪಾಲಾದುವು. ಮೊದಲ ಯುದ್ಧದ ಆರಂಭದ ದಿನಗಳಲ್ಲಿಯೇ ಬಾಲ್ಕನ್ ದೇಶಗಳಲ್ಲಿ ಪರಸ್ಪರ ಸಹಕಾರ ಹೊಂದಾಣಿಕೆ ಇರಲಿಲ್ಲ. ಅತೃಪ್ತಿ ಹೊಗೆಯಾಡುತ್ತಿತ್ತು. ಸರ್ಬಿಯಾ ಮತ್ತು ಬಲ್ಗೇರಿಯಾದ ನಡುವೆ ಇದ್ದ ರಹಸ್ಯ ಒಪ್ಪಂದ ಮೂಲೆಗುಂಪಾಗಿತ್ತು. ಆ ಒಪ್ಪಂದದಂತೆ ಸರ್ಬಿಯಾಕ್ಕೆ ದಕ್ಕಬೇಕಾಗಿದ್ದ ಅಲ್ಬೇನಿಯಾ ಈಗ ಸ್ವತಂತ್ರವಾಗಿತ್ತು, ಆದರೆ ಬಲ್ಗೇರಿಯಾಕ್ಕೆ ಒಪ್ಪಂದದಂತೆ ಸಿಕ್ಕಬೇಕಾಗಿದ್ದ ಪ್ರದೇಶವೆಲ್ಲ ಸಿಕ್ಕಿತ್ತು. ಮ್ಯಾಸಿಡೋನಿಯಾದ ವಿವಾದಾತ್ಮಕ ಭೂಪ್ರದೇಶವನ್ನು ತಮ್ಮ ನಡುವೆ ಹಂಚಿಕೊಳ್ಳಬೇಕೆಂದು ರಷ್ಯವನ್ನು ಕೇಳಲು ಸರ್ಬಿಯಾ ಅಪೇಕ್ಷಿಸಿತು. ಆದರೆ ಬಲ್ಗೇರಿಯಾಕ್ಕೆ ರಷ್ಯದಲ್ಲಿ ವಿಶ್ವಾಸವಿರಲಿಲ್ಲ. ಸರ್ಬಿಯಾದ ಪ್ರಗತಿಯನ್ನು ಆಸ್ಟ್ರಿಯಾ ಸಹಿಸದೆ ಹಂಗೇರಿ ತನಗೆ ನೆರವು ನೀಡುವುದೆಂಬ ನಂಬಿಕೆಯಿಂದ ಬಲ್ಗೇರಿಯಾ ಇನ್ನೊಂದು ಯುದ್ಧಕ್ಕೂ ಸಿದ್ಧವಾಗಿತ್ತು. ಬಲ್ಗೇರಿಯಾದ ವಿರುದ್ಧ ಗ್ರೀಸ್ ಹಾಗೂ ಸರ್ಬಿಯಾ 1913 ಜೂನ್ 1 ರಂದು ಒಪ್ಪಂದ ಮಾಡಿಕೊಂಡವು.

ಗ್ರೀಕರ ಮತ್ತು ಸರ್ಬಿಯನ್ನರ ಮೇಲೆ ಬಲ್ಗೇರಿಯನ್ನರು 1913 ಜೂನ್ 29-30 ರಾತ್ರಿ ಧಾಳಿಮಾಡಿದರು. ಇದೇ ಎರಡನೆಯ ಬಾಲ್ಕನ್ ಯುದ್ಧಕ್ಕೆ ನಾಂದಿಯಾಯಿತು. ಈ ಯುದ್ಧ ಅಲ್ಪಕಾಲದ್ದಾಗಿದ್ದರೂ ಮೊದಲನೆಯ ಯುದ್ಧಕ್ಕಿಂತ ಭೀಕರವಾದುದಾಗಿತ್ತು. ಜುಲೈಯಲ್ಲಿ ಗ್ರೀಸ್, ಮಾಂಟೆನಿಗ್ರೊ ಮತ್ತು ಸರ್ಬಿಯಾಗಳೊಂದಿಗೆ ರುಮೇನಿಯಾ ಹಾಗೂ ತುರ್ಕಿ ಸಹ ಸೇರಿದ್ದುವು. ಸಂಘಟಿತ ಪ್ರತಿರೋಧವನ್ನು ತಡೆದುಕೊಳ್ಳಲಾಗದ ಬಲ್ಗೇರಿಯಾ ಜುಲೈ 21ರಂದು ಕದನ ವಿರಾಮ ಕೋರಿತು. 1913 ಆಗಸ್ಟ್ 10ರಂದು ಬುಕಾರೆಸ್ಟ್ ಒಪ್ಪಂದವೇರ್ಪಟ್ಟಿತು. ಹಿಂದಿನ ಯುದ್ಧದಲ್ಲಿ ತುರ್ಕಿಯಿಂದ ದಕ್ಕಿದ ಪ್ರದೇಶದ ಬಹುಭಾಗ ಬಲ್ಗೇರಿಯಾದ ಕೈಬಿಟ್ಟಿತು. ಆದರೆ ಈ ಒಪ್ಪಂದದಿಂದ ಯೂರೋಪಿನಲ್ಲಿ ಅನೇಕ ಹೊಸ ಸಮಸ್ಯೆಗಳು ಉಂಟಾದವು. ಸರ್ಬಿಯಾದ ಪ್ರತಿಷ್ಠೆ ಹೆಚ್ಚಿ ಆಸ್ಟ್ರಿಯಾ-ಹಂಗೇರಿಯ ಸ್ಲಾವರಿಗೆ ತಮ್ಮ ಸ್ವಾತಂತ್ರ್ಯಯದೆಡೆಗೆ ಪ್ರಯತ್ನಗಳನ್ನು ಮುಂದುವರಿಸಲು ಪ್ರಚೋದನೆ ನೀಡಿತೆನ್ನಬಹುದು.

ಪರಿಣಾಮವಾಗಿ ಬಾಲ್ಕನ್ ಪರ್ಯಾಯದ್ವೀಪದಲ್ಲಿ ಮೊದಲ ಮಹಾಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಜರ್ಮನಿ ಮತ್ತು ಆಸ್ಟ್ರಿಯಾ ಹಂಗರಿಗಳ ಪಕ್ಷವಿದ್ದ ಬಾಲ್ಕನ್ ದೇಶಗಳೆಂದರೆ ಬಲ್ಗೇರಿಯಾ ಮತ್ತು ತುರ್ಕಿ ಮಾತ್ರ. ಫ್ರಾನ್ಸ್ ಇತರ ಬಾಲ್ಕನ್ ದೇಶಗಳ ಮಿತ್ರರಾಷ್ಟ್ರವಾಯಿತು. 1930ರ ದಶಕದಲ್ಲಿ ಈ ಪರ್ಯಾಯ ದ್ವೀಪದಲ್ಲಿ ಜರ್ಮನಿ ಹಾಗೂ ಇಟಲಿ ಅತ್ಯಂತ ಪ್ರಭಾವಶಾಲಿಯಾಗಿದ್ದುವು.

ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಹಾಗೂ ಇಟಲಿಗಳ ಪರ ಬಲ್ಗೇರಿಯಾ ಮತ್ತು ರುಮೇನಿಯಾ ಇದ್ದರೆ, ಮಿತ್ರರಾಷ್ಟ್ರಗಳ ಪರ ಯೂಗೊಸ್ಲಾವಿಯಾ, ಗ್ರೀಸ್ ಮತ್ತು ಅಲ್ಬೇನಿಯಾ ಇದ್ದುವು. ತುರ್ಕಿ ತಟಸ್ಥವಾಗಿತ್ತು. ಯೂಗೊಸ್ಲಾವಿಯಾಕ್ಕೆ ಸೇರಿದ ಮ್ಯಾಸಿಡೋನಿಯನ್ ಪ್ರದೇಶ ಮತ್ತು ಉತ್ತರ ಗ್ರೀಸಿನ ಒಂದು ಭಾಗ ಬಲ್ಗೇರಿಯಾ ವಶವಾದುವು. ಗ್ರೀಸ್ ಮತ್ತು ಯೂಗೊಸ್ಲಾವಿಯಾದ ಇತರ ಪ್ರದೇಶ ಜರ್ಮನಿ ಮತ್ತು ಇಟಲಿಗಳ ಪಾಲಾಯಿತು. 1944 ಅಕ್ಟೋಬರ್ ತನಕ ಈ ಪರ್ಯಾಯದ್ವೀಪದ ಬಹುಭಾಗ ಜರ್ಮನಿ ಮತ್ತು ಇಟಲಿಗಳ ಹತೋಟಿಯಲ್ಲಿದ್ದಿತು.

ಎರಡನೆಯ ಮಹಾಯುದ್ಧಾನಂತರ ಗ್ರೀಸ್ ಮತ್ತು ತುರ್ಕಿಗಳನ್ನು ಹೊರತುಪಡಿಸಿ ಉಳಿದೆಲ್ಲ ಬಾಲ್ಕನ್ ದೇಶಗಳು ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟವು. ಸಂಯುಕ್ತ ಸಂಸ್ಥಾನಗಳ ಮಿತ್ರದೇಶಗಳಾದ ಗ್ರೀಸ್ ಮತ್ತು ತುರ್ಕಿ ನ್ಯಾಟೋ-(ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ಸದಸ್ಯ ದೇಶಗಳಾದುವು. 1953ರಲ್ಲಿ ಪ್ರಥಮ ಬಾಲ್ಕನ್ ಒಡಂಬಡಿಕೆಗೆ ಗ್ರೀಸ್, ತುರ್ಕಿ ಹಾಗೂ ಯೂಗೋಸ್ಲಾವಿಯಾ ಸಹಿ ಹಾಕಿ ರಕ್ಷಣೆಯ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ ಸಮ್ಮತಿ ವ್ಯಕ್ತಪಡಿಸಿದುವು. 1954ರಲ್ಲಿ ಈ ರಾಷ್ಟ್ರಗಳು ಸಹಿಹಾಕಿದ ದ್ವಿತೀಯ ಬಾಲ್ಕನ್ ಒಡಂಬಡಿಕೆ ಮೊದಲನೆಯ ಒಪ್ಪಂದದ ಅಂಶಗಳಲ್ಲಿ ಮತ್ತೆ ನಂಬುಗೆಯನ್ನು ಸ್ಥಿರಪಡಿಸುವುದಾಗಿತ್ತು.	(ಎಚ್.ಎಂ.ಎನ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ